* * * *

ಭಾನುವಾರ, ಏಪ್ರಿಲ್ 1, 2018

ಇಲಿ ಮತ್ತು ಸಿಂಹ

*ಕಥಾಕವನ*

*ಇಲಿ ಮತ್ತು ಸಿಂಹ*


ಕಾಡಲಿ ಒಂದು ಮರವಿತ್ತು
ಮರದಡಿ ಸಿಂಹವು ಮಲಗಿತ್ತು
ಬೇಟೆಯನಾಡಿ ಬಳಲಿದ ಸಿಂಹಕೆ
ಸವಿ ಸವಿ ನಿದಿರೆಯು ಆವರಿಸಿತ್ತು||

ಮರದಡಿ ಇಣುಕಿದ ಇಲಿಯೊಂದು
ನೆಗೆಯುತ ಬಂದಿತು ಸಂತಸಗೊಂಡು
ಬಾಲವ ಜಗ್ಗಿ ಮೈಯನು ಏರಿ
ಸಿಂಹದ ಮೇಲೆ ಕುಣಿದಾಡಿತ್ತು||

ಸವಿ ಸವಿ ನಿದ್ದೆಯು ಮುಗಿದಿತ್ತು
ಸಿಂಹವು ಕಣ್ಣನು ತೆರೆದಿತ್ತು
ಬೆನ್ನಿನ ಮೇಲೆ ಕುಣಿಯುತಲಿದ್ದ
ಇಲಿಯನು ಕೈಯಲಿ ಇಡಿದಿತ್ತು||

ಅಯ್ಯೊ ನನ್ನ ಬಿಟ್ಟುಬಿಡು
ಕಾಡಿನ ರಾಜನೆ ದಯೆತೋರು
ತನ್ನಯ ತಪ್ಪನು ಮನ್ನಿಸಿ ಇಂದು
ಬಿಡಲು ಬೇಡಡಿತು ಇಲಿ ನೊಂದು||

ಸಿಂಹಕೆ ಕನಿಕರ ಮೂಡಿತ್ತು
ಕೋಪವು ಮೆಲ್ಲನೆ ತಗ್ಗಿತ್ತು
ಕಷ್ಟದಿ ನಿನ್ನನು ಕಾಪಾಡಿಹೆನು
ಬದುಕಿಕೊ ಎಂದು ಬಿಟ್ಟಿತ್ತು||

ದಿನಗಳು ಹಾಗೆಯೇ ಉರುಳಿದವು
ಸಿಂಹಕೆ ಹಸಿವು ಒಂದು ದಿನ
ಬೇಟೆಯನಾಡುತ ಸಿಂಹವು
ಒಂದು ಬಲೆಯಲಿ ಸಿಕ್ಕಿ ನರಳಿತ್ತು||

ಇಲಿಯದು ಛಂಗನೆ ಹಾರಿತ್ತು
ಬಲೆಯಲಿ ಸಿಂಹವ ಕಂಡಿತ್ತು
ಹಲ್ಲಲಿ ಬಲೆಯನು ಕಡಿದು ಹಾಕಿ
ಸಿಂಹದ ಜೀವ ಉಳಿಸಿತ್ತು||

ಸಿಂಹಕೆ ಸಂತಸವಾಗಿತ್ತು
ಇಲಿಯನು ಮುದ್ದಿಸಿ ನಲಿದಿತ್ತು
ಒಬ್ಬರಿಗೊಬ್ಬರು ನೋವಲಿ ನಲಿವಲಿ
ಬೆರೆವುದೇ ಜೀವನ ಎಂದಿತ್ತು||


✍ವೆಂಕಟೇಶ ಚಾಗಿ
ಲಿಂಗಸುಗೂರ
(ಚಿತ್ರ ಕೃಪೆ :- ಅಂತರ್ಜಾಲ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ