* * * *

ಮಂಗಳವಾರ, ಫೆಬ್ರವರಿ 27, 2018

ಮಂಗ & ಬೆಕ್ಕುಗಳು ( ಕಥಾಕವನ )

*ಕಥಾಕವನ*

💐*ಮಂಗ & ಬೆಕ್ಕುಗಳು* 💐

*ಇಬ್ಬರ ಜಗಳದಿ*
*ಯಾರಿಗೆ ಲಾಭವು*
*ಬನ್ನಿರಿ ನಾವು ತಿಳಿಯೋಣ*
*ನೀತಿಯ ಸಾರುವ*
*ಕಥೆಯನು ಕೇಳಿ*
*ಜೀವನ ಸುಂದರಗೊಳಿಸೋಣ||*

*ಸುಂದರವಾದ ಊರಿನಲಿ*
*ಬೆಕ್ಕುಗಳೆರಡು ಜೊತೆಯಲ್ಲಿ*
*ಆಡುತಲಿದ್ದವು ಅಲೆಯುತಲಿದ್ದವು*
*ಬದುಕುತಲಿದ್ದವು ಸಂತಸದಿ||*

*ಹಸಿವನು ನೀಗಲು ಒಂದುದಿನ*
*ಬೆಕ್ಕುಗಳಿಗೆ ಅದು ಸುದಿನ*
*ಪ್ರತಿಮನೆಯಲ್ಲೂ ಬೆಣ್ಣೆಕದ್ದವು*
*ಮರದಡಿ ಬಂದು ಸೇರಿದವು||*

*ಬೆಣ್ಣೆಯ ಆಸೆ ಹೆಚ್ಚಾಯ್ತು*
*ಇಬ್ಬರ ಜಗಳವು ಶುರುವಾಯ್ತು*
*ನನಗೂ ಜಾಸ್ತಿ ನಿನಗೂ ಜಾಸ್ತಿ*
*ಬೆಣ್ಣೆಯು ಗೆಳೆತನ ಕೆಡಿಸಿತ್ತು||*

*ಮರದಲಿ ಕುಳಿತಿರೊ ಮಂಗಣ್ಣ*
*ನೋಡುತಲಿದ್ದನು ಜಗಳವನ್ನ*
*ಉಪಾಯ ಹೂಡಿ ಮರದಿಂದಿಳಿದು*
*ಬೆಣ್ಣೆಯ ಹಂಚುವ ಮಾತಾಡಿತ್ತು||*

*ತನ್ನಿರಿ ಒಂದು ತಕ್ಕಡಿಯ*
*ಮಾಡುವೆ ಬೆಣ್ಣೆ ಹಂಚಿಕೆಯ*
*ಮಂಗನ ಮಾತನು ನಂಬಿದ ಗೆಳೆಯರು*
*ತಂದವು ತಕ್ಕಡಿ ಜೊತೆಗೂಡಿ||*

*ತೂಗಿದ ಬೆಣ್ಣೆಯ ಮಂಗಣ್ಣ*
*ಹೆಚ್ಚಿನ ಬೆಣ್ಣೆಯ ನುಂಗಣ್ಣ*
*ಆ ಕಡೆ ಜಾಸ್ತಿ ಈ ಕಡೆ ಕಡಿಮೆ*
*ಬೆಣ್ಣೆಯ ನುಂಗಿದ ಮಂಗಣ್ಣ||*

*ಮರವನು ಏರಿದ ಮಂಗಣ್ಣ*
*ಪೆದ್ದ ಗೆಳೆಯರ ನೋಡಣ್ಣ*
*ಇಬ್ಬರ ಜಗಳದಿ ಯಾರಿಗೋ ಲಾಭ*
*ಈ ಕಥೆ ನೀತಿಯ ತಿಳಿಯಣ್ಣ||*


✍ *ವೆಂಕಟೇಶ ಚಾಗಿ*
*ಲಿಂಗಸುಗೂರ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ