* * * *

ಬುಧವಾರ, ಏಪ್ರಿಲ್ 4, 2018

ಮಕ್ಕಳ ಕವಿತೆ - ಅಮ್ಮ (ಲೇ :- ಚಾಜು ನಾಯ್ಕ)

ಮಕ್ಕಳ ಕವಿತೆ
" ಅಮ್ಮ "

ಅಮ್ಮ ಅಮ್ಮ ನನ್ನಮ್ಮ
ಬಿಸಿ ಬಿಸಿ ಪಾಯಸ ಹಾಕಮ್ಮ
ದುಂಡನೆ ಲಾಡು ತಾರಮ್ಮ
ಗಸಗಸೆ ಪಾಯಸ ಬೇಕಮ್ಮ

ಅಮ್ಮ ಅಮ್ಮ ಬಾರಮ್ಮ
ಆಟ ಅಡೋಣ ಬಾರಮ್ಮ
ಗೋಲಿ ಗಜಗ ತಾರಮ್ಮ
ಕ್ರಿಕೇಟ ಬ್ಯಾಟು ಬೇಕಮ್ಮ

ಅಮ್ಮ ಅಮ್ಮ ಹೇಳಮ್ಮ
ಸಣ್ಣನೆಯ ಕತೆಯು ಹೇಳಮ್ಮ
ರೋಚಕತೆಯು ನೀಡಮ್ಮ
ಕಂದನಿಗೆ ಒಳ್ಳೆಯ ಮೌಲ್ಯವ ಬೇಕಮ್ಮ

ಅಮ್ಮ ಅಮ್ಮ ಕೇಳಮ್ಮ
ನಾನು ಹೊಲಕ್ಕೆ ಬರುವೆನಮ್ಮ
ಕುಂಟಿಯ ಮೇಲೆ ಕುರುವೆನಮ್ಮ
ಅಪ್ಪನ ಜೊತೆಯಲ್ಲಿ ಇರುವೆನಮ್ಮ

ಅಮ್ಮ ಅಮ್ಮ ಪ್ರೀತಿಯ ಅಮ್ಮ
ನಾನು ಸಂತೆಗೆ ಬರುವೆನಮ್ಮ
ಬಣ್ಣದ ಬುಗುರಿ ತರುವೆನಮ್ಮ
ಪೆಪ್ಪರಮೆಂಟು ಕೇಳುವೆನಮ್ಮ

ರಚನೆ : ಚಾರೇನಾರಾ ಜೀವಾ
(ಚಾಜುನಾಯ್ಕ ಶಿಕ್ಷಕರು
9916863338)

ಭಾನುವಾರ, ಏಪ್ರಿಲ್ 1, 2018

ಗೆಲುವು

*ಗೆಲುವು*


ಹತ್ತು ಹತ್ತು ಇಪ್ಪತ್ತು
ಓಟದ ಆಟವು ನಡೆತಿದ್ದು|

ಇಪ್ಪತ್ತು ಹತ್ತು ಮುವತ್ತು
ಆಮೆ ಮೊಲಕೆ ಓಟವು ನಡೆದಿತ್ತು

ಮುವತ್ತು ಹತ್ತು ನಲವತ್ತು
ಮೊಲವು ಓಟದಿ ಮುಂದಿತ್ತು

ನಲವತ್ತು ಹತ್ತು ಐವತ್ತು
ಆಮೆಯು ಮೆಲ್ಲಗೆ ನಡೆದಿತ್ತು

ಐವತ್ತು ಹತ್ತು ಅರವತ್ತು
ಮೊಲವು ಮರದಡಿ ಮಲಗಿತ್ತು

ಅರವತ್ತು ಹತ್ತು ಎಪ್ಪತ್ತು
ಆಮೆಯು ಗುರಿಯನು ಮುಟ್ಟಿತ್ತು

ಎಪ್ಪತ್ತು ಹತ್ತು ಎಂಬತ್ತು
ಮೊಲಕೆ ಎಚ್ಚರವಾಗಿತ್ತು

ಎಂಬತ್ತು ಹತ್ತು ತೊಂಬತ್ತು
ಆಮೆಯು ಆಟದಿ ಗೆದ್ದಿತು

ತೊಂಬತ್ತು ಹತ್ತು ನೂರು
ಈಕಥೆ ನೀತಿಯ ಸಾರು ||

✍ವೆಂಕಟೇಶ ಚಾಗಿ
ಲಿಂಗಸುಗೂರ

ಇಲಿ ಮತ್ತು ಸಿಂಹ

*ಕಥಾಕವನ*

*ಇಲಿ ಮತ್ತು ಸಿಂಹ*


ಕಾಡಲಿ ಒಂದು ಮರವಿತ್ತು
ಮರದಡಿ ಸಿಂಹವು ಮಲಗಿತ್ತು
ಬೇಟೆಯನಾಡಿ ಬಳಲಿದ ಸಿಂಹಕೆ
ಸವಿ ಸವಿ ನಿದಿರೆಯು ಆವರಿಸಿತ್ತು||

ಮರದಡಿ ಇಣುಕಿದ ಇಲಿಯೊಂದು
ನೆಗೆಯುತ ಬಂದಿತು ಸಂತಸಗೊಂಡು
ಬಾಲವ ಜಗ್ಗಿ ಮೈಯನು ಏರಿ
ಸಿಂಹದ ಮೇಲೆ ಕುಣಿದಾಡಿತ್ತು||

ಸವಿ ಸವಿ ನಿದ್ದೆಯು ಮುಗಿದಿತ್ತು
ಸಿಂಹವು ಕಣ್ಣನು ತೆರೆದಿತ್ತು
ಬೆನ್ನಿನ ಮೇಲೆ ಕುಣಿಯುತಲಿದ್ದ
ಇಲಿಯನು ಕೈಯಲಿ ಇಡಿದಿತ್ತು||

ಅಯ್ಯೊ ನನ್ನ ಬಿಟ್ಟುಬಿಡು
ಕಾಡಿನ ರಾಜನೆ ದಯೆತೋರು
ತನ್ನಯ ತಪ್ಪನು ಮನ್ನಿಸಿ ಇಂದು
ಬಿಡಲು ಬೇಡಡಿತು ಇಲಿ ನೊಂದು||

ಸಿಂಹಕೆ ಕನಿಕರ ಮೂಡಿತ್ತು
ಕೋಪವು ಮೆಲ್ಲನೆ ತಗ್ಗಿತ್ತು
ಕಷ್ಟದಿ ನಿನ್ನನು ಕಾಪಾಡಿಹೆನು
ಬದುಕಿಕೊ ಎಂದು ಬಿಟ್ಟಿತ್ತು||

ದಿನಗಳು ಹಾಗೆಯೇ ಉರುಳಿದವು
ಸಿಂಹಕೆ ಹಸಿವು ಒಂದು ದಿನ
ಬೇಟೆಯನಾಡುತ ಸಿಂಹವು
ಒಂದು ಬಲೆಯಲಿ ಸಿಕ್ಕಿ ನರಳಿತ್ತು||

ಇಲಿಯದು ಛಂಗನೆ ಹಾರಿತ್ತು
ಬಲೆಯಲಿ ಸಿಂಹವ ಕಂಡಿತ್ತು
ಹಲ್ಲಲಿ ಬಲೆಯನು ಕಡಿದು ಹಾಕಿ
ಸಿಂಹದ ಜೀವ ಉಳಿಸಿತ್ತು||

ಸಿಂಹಕೆ ಸಂತಸವಾಗಿತ್ತು
ಇಲಿಯನು ಮುದ್ದಿಸಿ ನಲಿದಿತ್ತು
ಒಬ್ಬರಿಗೊಬ್ಬರು ನೋವಲಿ ನಲಿವಲಿ
ಬೆರೆವುದೇ ಜೀವನ ಎಂದಿತ್ತು||


✍ವೆಂಕಟೇಶ ಚಾಗಿ
ಲಿಂಗಸುಗೂರ
(ಚಿತ್ರ ಕೃಪೆ :- ಅಂತರ್ಜಾಲ)

ಗಾಂಧೀಜಿ ( ಶಿಶುಗೀತೆ )

***ಗಾಂಧೀಜಿ**
**ಗಾಂಧೀಜಿ**

ಗಾಂಧೀಜಿ ಗಾಂಧೀಜಿ
ಎಲ್ಲರ ತಾತ
ಗಾಂಧೀಜಿ |
ಸ್ವಾತಂತ್ರ್ಯ ಕೊಡಿಸಿದ
ಗಾಂಧೀಜಿ |
ದೇಶಕೆ ದುಡಿದನು
ಗಾಂಧೀಜಿ |
ಅಹಿಂಸೆ ಸಾರಿದ
ಗಾಂಧೀಜಿ |
ರಾಷ್ಟಪಿತನು
ಗಾಂಧೀಜಿ |
ನಮ್ಮಯ ನೆಚ್ಚಿನ
ಗಾಂಧೀಜಿ ||

✍ ವೆಂಕಟೇಶ ಚಾಗಿ